ಮಹಾಕಾವ್ಯ -	
 	ಕಾವ್ಯ ಪ್ರಕಾರಗಳಲ್ಲಿ ಒಂದು. ಇಂಗ್ಲಿಷಿನ ಎಪಿಕ್ ಎಂಬುದಕ್ಕೆ ಸಮಾನಾರ್ಥವಾಗಿ ಈ ಪದವನ್ನು ಬಳಸಲಾಗುತ್ತಿದೆ. ಎಪೋಸ್ ಎಂಬ ಗ್ರೀಕ್ ಪದದಿಂದ ಎಪಿಕ್ ಬಂದಿದೆ. ಎಪೋಸ್ ಎಂದರೆ ಮೌಖಿಕ ಪಠನ ಅಥವಾ ಹಾಡು ಎಂದರ್ಥ. ಪಾಶ್ಚಾತ್ಯರು ಇದನ್ನು ವೀರಕಾವ್ಯ ಉನ್ನತ ಕಾವ್ಯ, ಕ್ಲಾಸಿಕ್ ಎಂಬ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ (ಆದರೆ ಇವು ಮಹಾಕಾವ್ಯಕ್ಕೆ ಸಂಪೂರ್ಣ ಸಮಾನಾರ್ಥಕಗಳಲ್ಲ).

	ಪಾಶ್ಚಾತ್ಯ ಕಾವ್ಯ ಮೀಮಾಂಸೆಯ ಮೂಲಪುರುಷನಾದ ಅರಿಸ್ಟಾಡಲ್ ರುದ್ರ ನಾಟಕಕ್ಕೂ ಮಹಾಕಾವ್ಯಕ್ಕೂ ಇರುವ ಸಾಮ್ಯ ವೈಷಮ್ಯಗಳನ್ನು ಹೀಗೆ ತಿಳಿಸುತ್ತಾನೆ: “ಮಹಾಕಾವ್ಯ ಪ್ರೌಢಛಂದಸ್ಸಿನಲ್ಲಿ ಉದಾತ್ತ ವ್ಯಕ್ತಿಗಳ ಅನುಕರಣವಾಗಿರುವಷ್ಟರ ಮಟ್ಟಿಗೆ ರುದ್ರನಾಟಕವನ್ನು ಹೋಲುತ್ತದೆ. ಆದರೆ ಅದರಿಂದ ಬೇರೆಯೂ ಆಗಿದೆ. (1) ಅದು ಒಂದೇ ಬಗೆಯ ಛಂದಸ್ಸಿನಲ್ಲಿದ್ದು, ಕಥನರೂಪದಲ್ಲಿರುತ್ತದೆ. (2) ಅದು ವೈಶಾಲ್ಯದಲ್ಲಿಯೂ ಭಿನ್ನವಾಗಿದೆ. ಅದರ ಕಾರ್ಯಕ್ಕೆ ಕಾಲದ ನಿಶ್ಚಿರವಾದ ಅವಧಿಯೇನೂ ಇಲ್ಲ." ಮಹಾಕಾವ್ಯವನ್ನು ಕುರಿತ ಕೆಲವು ಲಕ್ಷಣೀಕರಣಗಳು ಹೀಗಿವೆ: 'ಯಾವುದಾದರೊಂದು ಮಹಾಕ್ರಿಯೆಯನ್ನು ನಿರೂಪಿಸುವ ಕಾವ್ಯ; 'ತನ್ನ ದೀರ್ಘತೆ ಮತ್ತು ಉದಾತ್ತ ವೀರಮನೋಧರ್ಮದಿಂದ ಗಮನಾರ್ಹವಾದ ಕಾವ್ಯ; ಸಾಕಷ್ಟು ದೀರ್ಘವಾದ ಕಥನವಾಗಿದ್ದು, ಭವ ಘಟನೆಗಳನ್ನು ಕುರಿತ ಕಾವ್ಯ; 'ವೀರಕಾರ್ಯಗಳನ್ನು ನಿರೂಪಿಸುವ, ಸಾಮಾನ್ಯವಾಗಿ ಒಬ್ಬ ಮುಖ್ಯನಾಯಕನಿರುವ ಮತ್ತು ಒಮ್ಮೊಮ್ಮೆ ಪ್ರಬಲವಾದ ಒಂದು ರಾಷ್ಟ್ರೀಯ ಅರ್ಥವಿರುವ ದೀರ್ಘಕಥನ ಕಾವ್ಯ. ಯದ್ಧ ಪ್ರಸಕ್ತಿ, ಯಾವಾಗಲೂ ವಿಜಯಿಯಾಗುವ ಸದ್ಗುಣಶಾಲಿ ಮಾನವೀಯ ನಾಯಕ, ಅತಿಮಾನುಷವಾದ ಅಂಶಗಳು ಇವು ಕೂಡ ಮಹಾಕಾವ್ಯದ ಲಕ್ಷಣಗಳೆನ್ನಲಾಗಿದೆ. 

	ಮಹಾಕಾವ್ಯ ವೈಯಕ್ತಿಕ ಭಾವಗಳ ಅಭಿವ್ಯಕ್ತಿಯಲ್ಲ; ಅದು ಸಮಷ್ಟಿಪ್ರಜ್ಞೆಯ ಮತ್ತು ಯುಗ ಧರ್ಮದ ಆವಿಷ್ಕಾರ ಎಂಬುದನ್ನು ಪಾಶ್ಚಾತ್ಯ ವಿದ್ವಾಂಸರು ಒತ್ತಿ ಹೇಳಿದ್ದಾರೆ.

	ಮಹಾಕಾವ್ಯದಲ್ಲಿ ಎರಡು ಪ್ರಕಾರಗಳನ್ನು ಪಾಶ್ಚಾತ್ಯರು ಕಲ್ಪಿಸುತ್ತಾರೆ. ಮೊದಲನೆಯದನ್ನು ಮಾಚಿಕ, ವಿಕಾಸಶೀಲ, ಸಹಜ, ಪ್ರಾಚೀನ, ಅಧಿಕೃತ ಕಲಾತ್ಮಕ , ಕೃತಕ (ಅಥವಾ ಅನುಕರಣಾತ್ಮಕ) ಅರ್ವಾಚೀನ. ಸಾಹಿತ್ಯಕ ಮುಂತಾದ ವಿಶೇಷಣಗಳಿಂದಲೂ ನಿರ್ದೇಶಿಸಲಾಗಿದೆ.

	ವಾಚಿಕ ಮಾಕಾವ್ಯ; ಇದು ವಾಕ್ಪರಂಪರೆಯಲ್ಲಿ ಬೆಳೆದು ಬಂದುದು; ಬಹು ಕವಿ ಕೃತವಾದುದು. ಈ ಬಗೆಯ ಮಹಾಕಾವ್ಯ ಒಬ್ಬ ವ್ಯಕ್ತಿಯ ಹೆಸರಿನಲ್ಲಿದ್ದರೂ ಆತನೇ ಅದರ ಕರ್ತೃವೆಂದು ಹೇಳುವುದು ಕಷ್ಟ; ಪ್ರಾಯಶಃ ಆತ ಅದರ ಸಂಪಾದಕನಿರಬೇಕು . ಈ ವರ್ಗದ ಮಹಾಕಾವ್ಯ ಉಗಮಗೊಂಡಾಗ, ಸಾಕ್ಷರತೆಯೇ ಇರಲಿಲ್ಲ. ಆದ್ದರಿಂದ ಅದು ಚಾರಣರ ಮೂಲಕ ಬಾಯಿಂದ ಬಾಯಿಗೆ ಕಿವಿಯಿಂದ ಕಿವಿಗೆ ಯುಗಯಾತ್ರಿಯಾಗಿ ಸಾಗಿ ಬಂದು, ಇತಿಹಾಸದ ಯಾವುದೊಂದು ಹಂತದಲ್ಲಿ ಬರೆಹ ರೂಪಕ್ಕಿಳಿಯಿತು. ಆದರೆ ಆಮೇಲೂ ಅದು ಪ್ರಕ್ಷೇಪಗಳ ಮೂಲಕ ಬೆಳೆಯುವುದು ತಪ್ಪಲಿಲ್ಲ. ವಾಚಿಕ ಮಹಾಕಾವ್ಯವೇ ನಿಜವಾದ ವೀರಕಾವ್ಯ; ಏಕೆಂದರೆ, ಅದು ಹುಟ್ಟಿದ್ದೇ ವೀರಯುಗದಲ್ಲಿ. ಆಧ್ಯಾತ್ಮಿಕ ಪ್ರವೃತ್ತಿ ಹಾಗೂ ಸಾಂಸ್ಕøತಿಕ ಆಸಕ್ತಿ ಎಲ್ಲ ಮಹಾಕಾವ್ಯಗಳ ಸಮಾನ ಲಕ್ಷಣವೆಂದು ಹೇಳಲಾಗಿದೆ. ವಾಲ್ಮೀಕಿ ವ್ಯಾಸರ ಹೆಸರಿನಲ್ಲಿರುವ ಭರತಖಂಡದ ರಾಮಾಯಣ, ಮಹಾಭಾರತಗಳು, ಹೋಮರನ ಹೆಸರಿನಲ್ಲಿರುವ ಗ್ರೀಸ್‍ದೇಶದ ಇಲಿಯಡ್ ಮತ್ತು 'ಒಡಿಸ್ಸಿ- ಇವು ವಾಚಿಕ ಮಹಾಕಾವ್ಯಕ್ಕೆ ಪ್ರಸಿದ್ಧ ನಿದರ್ಶನಗಳು.

	ಲಿಖಿತ ಮಹಾಕಾವ್ಯ; ಇದು ಏಕವಿಕೃತವಾದದು; ಸಾಕ್ಷರತೆಯ ಯುಗಗಳಲ್ಲಿ ಹುಟ್ಟಿದ್ದು. ಇದರಲ್ಲಿ ಆಯಾ ಕವಿ ತನ್ನ ಕಾಲದ ಪ್ರಧಾನ ಮೌಲ್ಯವನ್ನು ಅಭಿವ್ಯಕ್ತಿಸಿರುತ್ತಾನೆ. ಹಲವು ಪ್ರಭಾವಗಳ ಮತ್ತು ಅನುಕರಣಗಳ ಫಲವಾಗಿ ಸಿದ್ಧವಾಗುತ್ತದೆ ಲಿಖಿತ ಮಹಾಕಾವ್ಯ. ಅದರ ವಸ್ತು ವಾಚಿಕ ಮಹಾ ಕಾವ್ಯದಿಂದಲೇ ಬಂದಿರುವುದು ಸಾಧ್ಯ. ಅಂತೂ ಲಿಖಿತ ಮಹಾಕಾವ್ಯದ ಕವಿ ತನ್ನ ಕಾಲದ್ದಲ್ಲದ ದೂತಗತ ಘಟನೆಗಳನ್ನು ಕುರಿತು ಬರೆಯುತ್ತಾನೆ. ಹೆಚ್ಚಿನ ಐಕ್ಯ ಮತ್ತು ಪ್ರಜ್ಞಾಪೂರ್ವಕಲೆ ಈ ವರ್ಗದ ಮಹಾಕಾವ್ಯದಲ್ಲಿರುತ್ತವೆ. ತಾತ್ತ್ವಿಕತೆ. ಸಾಂಕೇತಿಕತೆಗಳೂ ಇದರಲ್ಲಿ ಮಿಗಿಲಾಗಿ ಕಾಣಿಸಿಕೊಳ್ಳುವುದುಂಟು. ಯಾವುದಾದರೊಂದು ದೊಡ್ಡ ಚಾರಿತ್ರಿಕ ಪ್ರಕ್ರಿಯೆಯ ತರುವಾಯ ಲಿಖಿತ ಮಹಾಕಾವ್ಯದ ಉದಯವಾಗುತ್ತದೆ ಎನ್ನಲಾಗಿದೆ. ವರ್ಜಿಲನ ಈನಿಯಡ್ (ಲ್ಯಾಟಿನ್), ಡಾಂಟೆಯ ಡಿವೈನ್ ಕಾಮಡಿ (ಇಟಾಲಿಯನ್) ಮಿಲ್ಟನ್ನನ ಪ್ಯಾರಡೈಸ್ ಲಾಸ್ಟ್ (ಇಂಗ್ಲಿಷ್ ) ಇವು ಲಿಖಿತ ಮಹಾಕಾವ್ಯದ ಖ್ಯಾತ ಉದಾಹರಣೆಗಳು. ಕನ್ನಡದಲ್ಲಿ ಪಂಪ, ಕುಮಾರವ್ಯಾಸರು ರಚಿಸಿರುವ ಮಹಾಕಾವ್ಯ ಹುಟ್ಟಲಾರದೆಂಬ ವಾದವೊಂದುಂಟು. ಅದನ್ನು ಅಲ್ಲಗಳೆಯುತ್ತದೆ ಕುವೆಂಪು ಅವೆ ಶ್ರೀ ರಾಮಾಯಣದರ್ಶನಂ ಇದರಲ್ಲಿ ಇಂದಿನ ಯುಗ ಧರ್ಮವಾದ ಸರ್ವೋದಯ ಪ್ರತಿಮಿತವಾಗಿದೆ.

	ಯಾವ ಪ್ರಕಾರದ್ದೇ ಆಗಲಿ, ಮಹಾಕಾವ್ಯ ಅತ್ಯಂತ ಶ್ರೇಷ್ಠದರ್ಜೆಯ ಕವಿತೆ ಎನಿಸಿದೆ. ಅಷ್ಟೇ ಅಲ್ಲ ಅದು ಮಾನವನ ಆತ್ಮಕ್ಕೆ ಸಾಧ್ಯವಾದ ಅತ್ಯುನ್ನತ ಕೃತಿಯೆಂಬುದರಲ್ಲಿ ಸಂಶಯವಿಲ್ಲ ಎನ್ನುತ್ತಾನೆ ಕ್ರೈಡನ್. 			
(ಸಿ.ಪೆ.ಕೆ)

	ಭಾರತೀಯ ಮಹಾಕಾವ್ಯ ಶ್ರವ್ಯಕಾವ್ಯಗಳ ಗುಂಪಿಗೆಸೇರಿದುದು. ಪುರಾಣೇತಿಹಾಸಗಳಲ್ಲಿ ಬರುವ ಉನ್ನತವಾದ ಕಥಾ ವಸ್ತುವೊಂದನ್ನು ಅಥವಾ ಒಳ್ಳೆಯ ವಂಶದಲ್ಲಿ ಹುಟ್ಟಿದ ಉದಾತ್ತ ಗುಣವುಳ್ಳ ಕ್ಪ್ಷತ್ರಿಯನೊಬ್ಬನ ಅಥವಾ ಅಂಥವನ ವಂಶದವರ ಜೀವನ ಕಥೆಯನ್ನು ಅನೇಕ ಸರ್ಗಗಳಲ್ಲಿ ಪದ್ಯಾತ್ಮಕವಾಗಿ ವಿಸ್ತಾರವಾಗಿ ವರ್ಣಿಸಿರುವುದೇ ಮಹಾಕಾವ್ಯ ಎನಿಸುತ್ತದೆ. ಸರ್ಗಗಳು ಅತಿ ಚಿಕ್ಕವೂ ಆಗಬಾರದು ಅತಿ ದೀರ್ಘವೂ ಆಗಬಾರದು. ಇದರಲ್ಲಿ ನಾಲ್ಕು ಪುರುಷಾರ್ಥಗಳೂ ವಿವರಿಸಲ್ಪಟ್ಟಿರಬೇಕು, ಅಲ್ಲಲ್ಲಿ ದುಷ್ಟರನ್ನು ನಿಂದಿಸುವುದು, ಸತ್ಪುರುಷರ ಗುಣಗಳನ್ನು ಹೊಗಳುವುದು ಕಂಡುಬರಬೇಕು. ಸುರ್ಯೋದಯ, ಚಂದ್ರೋದಯ ಬೆಳಗ್ಗೆ, ಮಧ್ಯಾಹ್ನ ರಾತ್ರಿ, ಪ್ರದೋಷ ಋತುಗಳು, ಕಾಡು, ಬೆಟ್ಟ, ನದಿ ಸಾಗರ, ಪಟ್ಟಣ, ತೋಟ, ಪಾತ್ರವ್ಯಕ್ತಿಗಳು, ಅವರ ಗುಣದೋಷಗಳು, ಆಸ್ಥಾನ, ಬೇಟೆ, ಸಂಭೋಗ, ವಿರಹ, ಆಟಗಳು, ಮಕ್ಕಳ ಹುಟ್ಟು, ಪ್ರಯಾಣ, ದೌತ್ಯ, ನಾಯಕನವಿಜಯ ಯುದ್ಧ ಇವೇ ಮೊದಲಾದವು ಮಹಾಕಾವ್ಯದಲ್ಲಿ ಆಯಾ ಸಂದರ್ಭಗಳಲ್ಲಿ ವರ್ಣಿಸಲ್ಪಡಬೇಕು ಎಂದು ಲಾಕ್ಷಣಿಕರ ಅಭಿಪ್ರಾಯ. ಕಥಾವಸ್ತು ಚಿಕ್ಕದಾದರೂ ಮಧ್ಯೆ ಮಧ್ಯೆ ಬರುವ ಈ ವರ್ಣನೆಗಳಿಂದ ಕಾವ್ಯ ದೊಡ್ಡದಾಗುತ್ತದೆ. ವರ್ಣನೆಗಳಿರಬೇಕೆಂದು ಶಾಸ್ತ್ರಕಾರರ ಮತವಾದರೂ ಕಥಾಸರಣಿಗೆ ಭಂಗಬರುವಂತೆ ಅವನ್ನು ಬೆಳೆಸುವುದನ್ನು ಅವರು ಒಪ್ಪಿದಂತೆ ತೋರುವುದಿಲ್ಲ. ಆದರೆ ಈ ವಿಷಯದಲ್ಲಿ ಯಾವ ಶಾಸ್ತ್ರಕಾರನೂ ಸ್ಪಷ್ಟವಾಗಿ ಹೇಳಿಲ್ಲ . ಔಚಿತ್ಯದ ಪ್ರಾಮುಖ್ಯವನ್ನು ಮಾತ್ರ ಒತ್ತಿ ಹೇಳುತ್ತಾರೆ. ಇದನ್ನು ಮನಗಂಡು ಸ್ಪಷ್ಟವಾಗಿ ಹೇಳಿದವ ಕ್ರಿ.,ಶ 1070ರಲ್ಲಿದ್ದ ಸೋಮುದೇವ ಒಬ್ಬನೇ ಕಥಾರಸ ವಿಘಾತೇನ ಕಾವ್ಯಾಂಶಸ್ಯ ಯೋಜನಾ, ವೈದಗ್ಧ್ಯ ಖ್ಯಾತಿಲೋಭಾಯ ಮಮನೈವಾಯಮುದ್ಯಮಃ' ಅಂದರೆ ಕಥಾರಸಕ್ಕೆ ಅಡ್ಡಿ ಬರುವಂತೆ ಕಾವ್ಯದ ಅಂಶಗಳನ್ನು (ವರ್ಣನೆಗಳ ಹೆಚ್ಚಳ) ಸೇರಿಸುವುದು ತಮ್ಮ ಪಾಂಡಿತ್ಯ ಪ್ರಕಟಿಸುವ ಲೋಭವಾಗಿದೆ. ಆದರೆ ನನ್ನ ಪ್ರಯತ್ನ ಅಂಥದಲ್ಲ ಎಂದು ತನ್ನ ಕಥಾ ಸರಿತ್ಸಾಗರದ ಪ್ರಾರಂಭದಲ್ಲಿ ಹೇಳಿದ್ದಾನೆ. ಈ ರೀತಿ ವರ್ಣನೆಗಳನ್ನು ತುಂಬುವುದು ಹಾಗೂ ರಾಜನೀತಿ ಕಾಮಶಾಸ್ತ್ರಾದಿಗಳ ವಿಷಯಗಳನ್ನು ದೇರ್ಘವಾಗಿ ಪ್ರತಿಪಾದಿಸುವುದು ಮೊದಮೊದಲು ಇರದೆ, ಬರುಬರುತ್ತ ಹೆಚ್ಚಾಗಿ. ಕಡೆಗೆ ಅದೇ ಲಕ್ಷಣವಾಗಿ, ಮಾದರಿಯಾಗಿ ನಿಂತಂತೆ ತೋರುತ್ತದೆ. ಮಹಾಕಾವ್ಯಗಳಲ್ಲಿ ಕಥೆಗಿಂತ, ಭಾಷೆಗೆ ಶೈಲಿಗೆ ಅಂದರೆ ಪದಗಳ ಜೋಡಣೆಗೆ ಪ್ರತಿಪಾದನಾರೀತಿಗೆ ಮಾಧುರ್ಯಕ್ಕೆ ಹೆಚ್ಚು ಪ್ರಾಧಾನ್ಯ ಎನ್ನಬಹುದು ಹೀಗೆ ಕವಿಗಳು ತಮ್ಮ ಕಾವ್ಯಗಳನ್ನು ಶಾಸ್ತ್ರ ಮರ್ಯಾದೆಗೆ ತಕ್ಕಂತೆ ರಚಿಸಿದ್ದರೂ ಅವುಗಳಲ್ಲಿ ನೈಜತೆಗೆ, ಪ್ರತಿಭೆಗೆ ಏನೂ ಕಡಿಮೆಯಿಲ್ಲ. ಕವಿಗಳು ಜೀವನದ ನಾಡಿಯನ್ನು ಹಿಡಿದಿದ್ದರು. ಅದರ ಏರಿಳಿತಗಳನ್ನು ತಿಳಿದಿದ್ದರು ಎಂಬುದು ಅವರ ಕಾವ್ಯಗಳಲ್ಲಿ ಪ್ರತಿಬಿಂಬಿತವಾಗಿವೆ. ಕಣ್ಣಿಗೆ ಕಾಣುವ ಪ್ರಂಪಚದ ಎಲ್ಲ ವ್ಯವಹಾರಗಳೂ ಕಾವ್ಯ ಪ್ರಪಂಚದಲ್ಲಿ ಕರಗಿ ಸಾಧಾರಣೀಕೃತವಾಗಿ, ರಸಾನುಭವದ ವಿಷಯವಾಗುತ್ತವೆ. ಇದರಿಂದ ಕವಿಗಳು ರಸದ ಕಡೆ ಗಮನಹರಿಸಿ ಅದರ ಅನುಭವಕ್ಕೆ ಬೇಕಾದ ಸನ್ನಿವೇಶಾದಿಗಳನ್ನು ತಕ್ಕ ಶಬ್ದರಾಶಿಗಳಲ್ಲಿ, ಅವಕ್ಕೆ ಸರಿಹೊಂದುವ ವೃತ್ತಗಳಲ್ಲಿ ಚಿತ್ರಿಸಲು ಯತ್ನಿಸಿದ್ದಾರೆ.

	ಪ್ರಕೃತಿಯ ಬಗ್ಗೆ ಪೂಜ್ಯಭಾವ ಪ್ರೇಮಭಾವಗಳನ್ನು ವ್ಯಕ್ತಪಡಿಸುವುದು ಸಂಸ್ಕøತವಾಙ್ಮಯಕ್ಕೆ ಸಹಜವಾಗಿದೆ. ಕವಿಗಳು ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಹಿಡಿದಿರುವುದರ ಮೂಲಕ ಪ್ರಕೃತಿ ಮಾತೆಗೆ ತಮ್ಮ ಅಮೂಲ್ಯಕಾಣಿಕೆ ಅರ್ಪಿಸಿದ್ದಾರೆ. ಶಬ್ದಗಳ ಮೂಲಕ ಒಂದು ಚಿತ್ರವೇ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ಪ್ರಕೃತಿಯನ್ನು ಎಷ್ಟು ದೃಷ್ಟ್ಟಿಗಳಿಂದ ನೋಡಿದರೂ ಎಷ್ಟು ಮಾತುಗಳಲ್ಲಿ ಬಣ್ಣಿಸಿದರೂ ಕವಿಗಳಿಗೆ ತೃಪ್ತಿಯೇ ಆಗುವುದಿಲ್ಲ ಎನ್ನಬಹುದು.

	ಮಹಾಕಾವ್ಯಗಳಲ್ಲಿಯೂ ಅಷ್ಟೇ, ಅತಿ ದಃಖವಾಗಲೀ, ಅತಿ ಸುಖವಾಗಲೀ ಕಾಣಿಸಿಕೊಳ್ಳುವುದಿಲ್ಲ. ಎಲ್ಲವೂ ಒಂದು ಸಮತೋಲನದಲ್ಲಿ ನಿರೂಪಿತವಾಗಿವೆ. 

	ಸಂಸ್ಕøತ ಕವಿಗಳು ತಮ್ಮ ಕಾವ್ಯಗಳ ವಸ್ತುಗಳನ್ನು ರಾಮಾಯಣ, ಮಹಾಭಾರತ, ಪುರಾಣಗಳು, ಬೃಹತ್ಕಥೆ ಇವುಗಳಿಂದ ಆರಿಸಿಕೊಂಡಿದ್ದಾರೆ. ಕಥೆಯನ್ನು ಮೂಲದಲ್ಲಿ ಇರುವಂತೆಯೋ ಆಲ್ಲಿಯ ಚೌಕಟ್ಟಿನಲ್ಲಿಯೇ ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಅಲ್ಲಲ್ಲಿ ಬದಲಾಯಿಸಿಯೋ ಅಥವಾ ಪೂರ್ಣವಾಗಿ ಬದಲಾಯಿಸಿಯೋ ತಮ್ಮ ಕಾವ್ಯಗಳಿಗೆ ಅಳವಡಿಸಿಕೊಂಡಿದ್ದಾರೆ. ಸಂಸ್ಕøತ ಕಾವ್ಯಗಳಲ್ಲಿ ಸುತ್ತಮುತ್ತಲಿನ ಜನಜೀವನದ ಆಧಾರದ ಮೇಲೆ ಕಲ್ಪಿತವಾದ ವಸ್ತು ವಿರಳ. ಹಾಗಾದರೂ ಕಾವ್ಯಗಳಲ್ಲಿ ಚಿತ್ರಿತವಾಗಿರುವುದು ಕವಿಗಳ ಸಮಕಾಲೀನ ಜನರ ಮನೋಭಾವನೆ. ಹೆಚ್ಚಾಗಿ ಹೊಸ ಕಥೆಗಳನ್ನೇ ತೆಗೆದುಕೊಂಡು ಅದಕ್ಕೆ ಹೊಸ ಜೀವಕಳೆಯನ್ನು ಕೊಟ್ಟಿದ್ದಾರೆ. ಕುತೋವಾ ನೂತನಂ ವಸ್ತುವಯಂ ಉತ್ಪ್ರೇಕ್ಷಯಿತುಂ ಕ್ಷಮಾಃ ವಚೋವಿನ್ಯಾಸ ವ್ಶೆಚ್ರ್ಯಿವ ಮಾತ್ರಮತ್ರ ವಿಚಾರ್ಯತಾಂ ಹಲವು ಕವಿಗಳು ತಮಗೆ ಆಶ್ರಯವನ್ನು ಕೊಟ್ಟ ದೊರೆಗಳ ಗುಣವೇ ಮೊದಲಾದ ಅತಿಶಯಗಳನ್ನು ವರ್ಣಿಸಿದ್ದಾರೆ (ಇಂಥವನ್ನು ಇತಿಹಾಸಕಾವ್ಯಗಳೆಂದು ಆಧುನಿಕರು ಕರೆಯುತ್ತಾರೆ.).

	ಮಹಾಕಾವ್ಯ ಪದ್ಧತಿಯ ಮೂಲಕ್ಕೆ ವೈದಿಕ ವಾಙ್ಮಯದವರೆಗೂ ಹೋಗಬೇಕಾಗಿಲ್ಲ ಅಥವಾ ಸಂಸ್ಕøತ ಕಾವ್ಯ ಪದ್ಧತಿಗೆ ಪೂರ್ವಭಾವಿಯಾಗಿ ಪ್ರಾಕೃತ ಸಾಹಿತ್ಯವೊಂದು ಬೆಳೆದಿತ್ತು ಎಂದು ಹಲವು ವಿದ್ವಾಂಸರು ಯೋಚಿಸಿರುವಂತೆಯೂ ಯೋಚಿಸಬೇಕಾಗಿಲ್ಲ ಕ್ರಿ. ಪೂ.2ನೆಯ ಶತಮಾನದ ಸುಮಾರಿಗೆ ಸಂಸ್ಕøತ ಕಾವ್ಯಪದ್ಧತಿ ಒಂದು ನಿಯಮಬದ್ಧ ರೀತಿಯಲ್ಲಿಯ ಅನೇಕ ಸುಂದರ ಶ್ಲೋಕಗಳನ್ನು ಉದಾರಿಸಿದ್ಧಾನೆ. ಈ ಕಾಲಕ್ಕೆ ಸೇರಿದ ರಾಮಾಯಣವೂ ಮೇಲ್ಮಟ್ಟದ ಮಹಾಕಾವ್ಯವೇ ಆಗಿವೆ.

	ಮಹಾಕಾವ್ಯಗಳನ್ನು ಮೂರು ಘಟ್ಟಗಳಲ್ಲಿ ಕಾಣಬಹುದು : 1. ಕಾಳಿದಾಸನ ಪೂರ್ವಜರು ಮತ್ತು ಕಾಳಿದಾಸ (ಕ್ರಿ.ಶ ಸು.500); 2 ಭಾರವಿಯಿಂದ (ಕ್ರಿ.ಶ.ಸು.600) ಮಾಘ (ಕ್ರಿ.ಶ.ಸು 9ನೆಯ ಶತಮಾನ); 3 ಅರ್ವಾಚಿನ ಮಹಾಕಾವ್ಯ (ಕ್ರಿ.ಶ. 10ನೆಯ ಶತಮಾನದಿಂದ) ಕಾಳಿದಾಸನ ರಘುವಂಶ ಮತ್ತು ಕುವಾರಸಂಭವ, ಭಾರವಿಯ ಕಿರಾತಾರ್ಜುನೀಯ, ಮಾಘನ ಶಿಶುಪಾಲ ವಧೆ ಮತ್ತು ಶ್ರೀಹರ್ಷನ ನೈಷಧೀಯ ಚರಿತ್ರೆ ಇವು ಪಂಚ ಮಹಾಕಾವ್ಯಗಳೆಂದು ಪ್ರಸಿದ್ಧವಾಗಿವೆ.

	1. ಕಾಳಿದಾಸನಿಗಿಂತ ಹಿಂದೆ ಇದ್ದ ಕವಿಗಳಲ್ಲಿ ಕೆಲವರ ಕೃತಿಗಳು ಮಾತ್ರ ದೊರೆತಿವೆ. ರಾಮಾಯಣ ವಾಲ್ಮೀಕಿ ರಚಿಸಿದ ದೀರ್ಘಕಾವ್ಯ ಸಾಮಾನ್ಯವಾಗಿ ಇದನ್ನು ಮಹಾಭಾರತದೊಡನೆ ಸೇರಿಸಿ ಇತಿಹಾಸವಿಂದು ಪರಿಗಣಿಸಲ್ಪಟ್ಟರೂ ಇದು ಒಂದು ಭವ್ಯಕಾವ್ಯ. ಇದನ್ನು ಆದಿಕಾವ್ಯ ಎಂದೂ ವಾಲ್ಮೀಕಿಯನ್ನು ಆದಿಕವಿ ಎಂದೂ ಕರೆಯುತ್ತಾರೆ. ಅತ್ಯಂತ ಸುಲಭವಾದ ಭಾಷೆ ಮತ್ತು ಸರಳವಾದ ಶೈಲಿಯಲ್ಲಿರುವ ಉಜ್ವಲ ಕಾವ್ಯಕ್ಕಿರುವ ಪ್ರಶಸ್ತಿ ಅಷ್ಟೇನೂ ಹೆಚ್ಚಲ್ಲ. ಇದು ಸಂಸ್ಕøತ ಸಾಹಿತ್ಯದಲ್ಲಿ ಅಮೂಲ್ಯರತ್ನವಾಗಿರುವುದಲ್ಲದೆ ಈ ತನಕ ಆ ಸಾಹಿತ್ಯದ ಬೆಳೆವಣಿಗೆ ಅಗಾಧವಾಗಿ ಆಗಿದೆ. ಕ್ರಿ.ಶ. ಸು.78ರಲ್ಲಿ ಅಶ್ವಘೋಷನೆಂಬ ಕವಿಯೂ ಶಾಸ್ತ್ರಜ್ಞನೂ ಇದ್ದ. ಅವನು ಬೌದ್ಧ ಬುದ್ಧಚರಿತ ಮತ್ತು ಸೌಂದರನಂದ ಇವನ ಮಹಾಕಾವ್ಯಗಳು. 13 ಸರ್ಗಗಳ ಬುದ್ಧ ಚರಿತ್ರೆಯಲ್ಲಿ ಬುದ್ಧನ ಕಥೆ ಉತ್ತಮ ಶೈಲಿಯಲ್ಲಿ ನಿರೂಪಿಸಲ್ಟಟ್ಟಿದೆ. ಸೌಂದರನಂದ 18 ಸರ್ಗಗಳ ಸುಂದರ ಕಾವ್ಯ. ಬೌದ್ಧ ಮತಕ್ಕೆ ಸುಂದರ ಪರಿವರ್ತಿತನಾದುದನ್ನು ಕವಿ ವರ್ಣಿಸಿದ್ದಾನೆ. ಅಲ್ಲಲ್ಲಿ ಸಂದರ್ಭಕ್ಕೆ ತಕ್ಕಂತೆ ಬೌದ್ದಮತದ ತತ್ತ್ವಗಳನ್ನು ಹೆಣೆಯಲಾಗಿದೆ.

	ಪ್ರಕೃಷ್ಟ ರೀತಿಯ ಕಾವ್ಯಶೈಲಿಯಲ್ಲಿ ಬರೆಯಲ್ಪಟ್ಟಿರುವ ರುದ್ರದಾಮನ ಗಿರಿನಾರ್ ಪ್ರಶಸ್ತಿಯೂ (ಕ್ರಿ.ಶ. 150) ಅಲಹಾಬದಿನ ಹರಿಷೇಣನ ಪ್ರಶಸ್ತಿಯೂ (ಕ್ರಿ.ಶ.350) ವತ್ಸಭಟ್ಟಿಯ ಮಂದಸಾರ ಶಿಲಾಲೇಖವೂ (ಕ್ರಿ.ಶ. 473) ಕಾವ್ಯಶೈಲಿಯ ಪ್ರಾಚುರ್ಯವನ್ನು ವ್ಯಕ್ತಪಡಿಸುವುವು.

	ಕ್ರಿ.ಶ.4ನೆಯ ಶತಮಾನದಲ್ಲಿ ಬುದ್ಧಘೋಷನೆಂಬ ಖ್ಯಾತಿವೆತ್ತ ಬೌದ್ಧ ಪದ್ಯ ಚೂಡಾಮಣಿ ಎಂಬ 10 ಸರ್ಗಗಳ ಕಾವ್ಯ ಬರೆದ. ಸರಳವಾದ ಹಾಗೂ ಆಕರ್ಷಣೀಯ ಶೈಲಿಯಲ್ಲಿ ಬುದ್ಧನ ಜೀವನಚರಿತ್ರೆಯನ್ನು ವಿವರಿಸಿದ್ದಾನೆ. ಈತ ಅಶ್ವಘೋಷನ ಕಾವ್ಯವನ್ನು ಅನುಸರಿಸಿದ್ದನಾದರೂ ಅಲ್ಲಲ್ಲಿ ಕೆಲವು ವ್ಯತ್ಯಾಸಗಳನ್ನು ಕೂಡ ಮಾಡಿದ್ದಾನೆ. ಪ್ರವರಸೇನನು (ಕ್ರಿ.ಶ.ಸು .6ನೆಯ ಶತಮಾನದ ಆದಿ) ಪ್ರಾಕೃತಭಾಷೆಯಲ್ಲಿ ಸೇತುಬಂಧವೆಂಬ ಕಾವ್ಯ ಬರೆದ. ರಾಮಾಯಣದ ಕಥೆಯೇ ವಸ್ತು. ಈ ಕವಿಯ ಕೀರ್ತಿಸಾಗರವನ್ನು ದಾಟಿಹೋಗಿತ್ತೆಂದು ಬಾಣ ಭಟ್ಟನೂ ಈ ಕಾವ್ಯ ಸೂಕ್ತಿರತ್ನಮಯವಾಗಿದೆಯೆಂದು ದಂಡಿಯೂ ಹೇಳಿರುವರು.
	
ಸಂಸ್ಕøತ ಸಾಹಿತ್ಯದಲ್ಲಿ ಆದಿಕವಿ ವಾಲ್ಮೀಕಿಯನ್ನು ಬಿಟ್ಟರೆ ಕವಿಕುಲಗುರು ಎಂದು ಹೆಸರುವಾಸಿಯಾದವ ಕಾಳಿದಾಸನೇ. ಈತನ ಮಹಾಕಾವ್ಯಗಳು ಎರಡು. ರಘುವಂಶದಲ್ಲಿ (19 ಸರ್ಗಗಳು) ದಿಲೀಪನಿಂದ ರಾಮನ ತನಕ ವಿವರವಾಗಿಯೂ ಅನಂತರ ಅಗ್ನಿವರ್ಣನತನಕ ಸಂಕ್ಷೇಪವಾಗಿಯೂ ಸೂರ್ಯವಂಶದ ಚರಿತ್ರೆ ಬರೆಯಲ್ಪಟ್ಟಿದೆ. ಕುಮಾರಸಂಭವದಲ್ಲಿ (17 ಸರ್ಗಗಳು) ತಾರಕಾಸುರ ವಧೆ ಅಳವಡಿಸಲ್ಪಟ್ಟಿದೆ. ಸರಳ ಹಾಗೂ ಪ್ರಕೃಷ್ಟಕಾವ್ಯವನ್ನು ನೇಯುವ ಕಾಳಿದಾಸನ ಸಾಮಥ್ರ್ಯವನ್ನು ಎಷ್ಟು ಹೇಳಿದರೂ ತೀರದು. ಸುಲಭ ಶೈಲಿಯ ಮಹಾಕಾವ್ಯಗಳಲ್ಲಿ ಕಾಳಿದಾಸನವೇ ಕಡೆಯವೆಂದರೆ ತಪ್ಪಾಗಲಾರದು. ಮುಂದೆ ಬಂದ ಮಹಾಕಾವ್ಯಕರ್ತೃಗಳಿಗೆ ಕಾಳಿದಾಸ ಮಾದರಿಯಾದರೂ ಇವನ ಸರಳ ಶೈಲಿಯನ್ನು ಇಬ್ಬರೂ ಅನುಸರಿಸಿಲ್ಲ. ಮುಂದಿನವು ಬಲುಮಟ್ಟಿಗೆ ಪಾಂಡಿತ್ಯ ಪ್ರದರ್ಶನಗಳು; ವರ್ಣನೆಗಳು ಪ್ರಾಸಂಗಿಕಗಳಾಗಿರದೆ ಅವುಗಳಿಗಾಗಿಯೇ ಕಥೆಯೊಂದನ್ನಾರಿಸಿಕೊಂಡು ಕಾವ್ಯಗಳು ರಚಿಸಲ್ಪಟ್ಟಂತಿವೆ.

	2. ಕಾಳಿದಾಸನ ಅನಂತರ ಮಹಾಕಾವ್ಯಗಳನ್ನು ಬರೆದವರಲ್ಲಿ ಭಾರವಿಯೇ ಮೊದಲಿಗ ಎಂದು ತೋರುತ್ತದೆ. ಆದರೂ ಕಾಳಿದಾಸನ ಶೈಲಿ ಒಮ್ಮೆಲೆ ಬದಲಾಗಿ ಆಲಂಕಾರಿಶೈಲಿ ಮತ್ತು ಶಬ್ದಾಡಂಬರಗಳ ಮೇಲೆ ಗಮನ ಹೆಚ್ಚಾಗಿರುವುದು ಕಂಡುಬರುತ್ತದೆ. ಇವನ ಕಿರಾತಾರ್ಜುನೀಯಕಾವ್ಯ 18 ಸರ್ಗಗಳಿಂದ ಕೂಡಿದೆ. ಮಹಾಭಾರತದಲ್ಲಿ ಉಕ್ತವಾದ ಅರ್ಜುನನಿಗೂ ಕಿರಾತವೇಷದ ಶಿವನಿಗೂ ನಡೆದ ಕಾಳಗದ ಕಥೆಯೇ ಇದರ ವಸ್ತು. ಕಾಡು ನಗರ ಮೊದಲಾದವುಗಳ ದೀರ್ಘ ವರ್ಣನೆಗಳಿವೆ. ರಾಜ ನೀತಿಶಾಸ್ತ್ರ ವಿಚಾರಗಳ ವಿವರಣೆಯನ್ನೂ ಅಲ್ಲಲ್ಲಿ ಸೇರಿಸಿದ್ದಾನೆ. ಒಂದು ಸರ್ಗವನ್ನು ಶಬ್ದ ಚಿತ್ರಗಳಿಗಾಗಿಯೇ ಮೀಸಲಿಟ್ಟಿದ್ದಾನೆ. ಪದಗಳನ್ನು ಆರಿಸುವುದರಲ್ಲಿ ಭಾರವಿ ಬಲುಚತುರ. ಅರ್ಥಗೌರವಕ್ಕೆ ಪ್ರಸಿದ್ಧನಾದ ಇವನ ಭಾಷೆ ಅಷ್ಟು ಸುಲಭವಲ್ಲ. ಅದರೂ ಪ್ರಕೃತಿಯ ವಿಷಯದಲ್ಲಿ ಭಾರವಿಯ ಸ್ವಾಭಾವಿಕ ಮನೋಭಾವನೆ ಅವನೆಡೆಗೆ ನಮ್ಮನ್ನು ಎಳೆಯುತ್ತದೆ. ಈತನ ಕಾಲ ಕ್ರಿ,ಶ.6ನೆಯ ಶತಮಾನದ ಅಂತ್ಯಭಾಗ ಎನ್ನಬಹುದು.

	ವ್ಯಾಕರಣಶಾಸ್ತ್ರದ ಪ್ರತಿ ಹೆಜ್ಜೆಗೂ ಉದಾಹರಣ ರೂಪವಾಗಿ ರಾವಣವಧ ಎಂಬ ಕಾವ್ಯವನ್ನುಭಟ್ಟಿ ರಚಿಸಿದ್ದಾನೆ. ಇದನ್ನು ಭಟ್ಟೀಕಾವ್ಯ ಎಂದೂ ಕರೆಯುತ್ತಾರೆ. ರಾಮಾಯಣದ ಕಥೆಯನ್ನು 22 ಸರ್ಗಗಳಲ್ಲಿ ಹೇಳಿದ್ದಾನೆ. ಪದಶಾಸ್ತ್ರದ ಬೋಧನೆಗಾಗಿ ಬರೆದ ಕಾವ್ಯದಲ್ಲಿ ಮಾಧುರ್ಯವನ್ನು ಕಾಣುವುದು ಅಪರೂಪವೆಂದು ಹೇಳಬೇಕಾದುದಿಲ.್ಲ ಈತ ಕ್ರಿಶ.ಸು. 650ರಲ್ಲಿದ್ದನೆನ್ನಬಹುದು.

	ಕುಮಾರದಾಸನ ಜಾನಕೀಹರಣ ರಾಮಾಯಣ ಕಥೆಯನ್ನೇ ವರ್ಣಿಸುವ ಮತ್ತೊಂದು ಕಾವ್ಯ. ಇದು 25 ಸರ್ಗಗಳಲ್ಲಿ ಪೂರ್ಣವಾಗಿದ್ದಿರಬಹುದೆಂದು ತಿಳಿದುಬರುತ್ತದೆ. ಆದರೆ 14 ಸರ್ಗಗಳು ಮತ್ತು 15ತ ಕೆಲವು ಭಾಗ (ರಾವಣನ ಅಸ್ಥಾನದಲ್ಲಿ ಅಂಗದನ ದೌತ್ಯದವರೆಗೆ) ಮಾತ್ರ ಇಂದು ಉಪಲಬ್ಧವಾಗಿವೆ. ಇದೂ ಸಹ ಸಿಂಹಳೀ ಭಾಷಯಲ್ಲಿದ್ದ ಪದಶಃ ವ್ಯಾಖ್ಯಾನವೊಂದರಿಂದ ಸಂಗ್ರಹಿಸಲ್ಪಟ್ಟಿದೆ. ಈತ ಕಾಳಿದಾಸನನ್ನು ಚಾಚೂತಪ್ಪದಂತೆ ಅನುಕರಿಸುತ್ತಾನೆ. ಆಕಾಲದ ಕಾವ್ಯ ಪದ್ಧತಿಗೆ ತಕ್ಕಂತೆ ವರ್ಣನೆಗಳು ತುಂಬಿದ್ದರೂ ಕಥಾಸರಣಿಯ ಸ್ವಾರಸ್ಯ ತಪ್ಪುವುದಿಲ್ಲ. ರಮ್ಯವಾದ ಮಾತುಗಳನ್ನು ಉಪಯೋಗಿಸುವುದರಲ್ಲಿ ನೈಪುಣ್ಯವೂ ಅನೇಕ ಬಗೆಯ ವೃತ್ತಗಳನ್ನು ಕಟ್ಟುವ ಚಾತುರ್ಯವೂ ಈತನಲ್ಲಿ ಕಾಣಬಹುದು. ಈತ ಕ್ರಿ.ಶ. 7ನೆಯ ಶತಮಾನದ ಅಂತ್ಯದಲ್ಲಿದ್ದನೆಂದು ಭಾವಿಸಲಾಗಿದೆ.

	ಮಾಘನ ಶಿಶುಪಾಲವಧ ಕಾವ್ಯ 20 ಸರ್ಗಗಳಲ್ಲಿ ಮಹಾಭಾರತದಲ್ಲಿ ಬರುವ ಕಥೆಯೊಂದನ್ನು ವರ್ಣಿಸುತ್ತದೆ. ಭಾರತದ ಕಥಾ ಚೌಕಟ್ಟನಲ್ಲಿಯ ಸಣ್ಣ ಕಥೆ ಕಾವ್ಯದಲ್ಲಿ ವರ್ಣನೆಗಳಿಂದ ವಿಸ್ತಾರವಾಗಿದೆ. ಪ್ರಕೃತಿಯ, ವ್ಯಕ್ತಿಗಳ ವರ್ಣನೆಗಳು ಜೊತೆಗೆ ಕಾಮಶಾಸ್ತ್ರ ಸಂಬಂಧದ ವರ್ಣನೆಗಳೂ ಮಾಘನಲ್ಲಿ ಕಂಡುಬರುತ್ತವೆ. ಶಬ್ದ ಚಿತ್ರಗಳಲ್ಲಿ ಮಾಘ ಬಲುನಿಪುಣ. ಇವನ ಶಬ್ದಭಂಡಾರ ಅಲಂಕಾರಗಳ ನಿಧಿ ಅಪಾರವಾದುದು. ಈತನ ಕಾವ್ಯದಲ್ಲಿ ಅಲಂಕಾರ, ಅರ್ಥಗೌರವ ಹಾಗೂ ಪದಲಾಲಿತ್ಯ ಒಟ್ಟಿಗೆ ಸೇರಿಕೊಂಡಿವೆ. 

	3.ಅರ್ವಾಚೀನ ಕವಿಗಳಿಗೆ ಕಾಳಿದಾಸ ಭಾರವಿಯರಿಗಿಂತ ಮಾಘನೇ ಮಾದರಿಯಾದ. ಈ ಪ್ರಭಾವದಿಂದ ಕವಿಗಳ ಕವಿತಾಪ್ರದರ್ಶನವಾಗದೆ, ಪಾಂಡಿತ್ಯ ಪ್ರದರ್ಶನವಾಯಿತು.

	ಶಿವ ಅಂಧಕಾಸುರನನ್ನು ಸಂಹರಿಸಿದ ಕಥೆಯನ್ನು ರತ್ನಾಕರ 50 ಸರ್ಗಗಳಲ್ಲಿ ಹರವಿಜಯ ಎಂಬ ಹೆಸರಿನಲ್ಲಿ ಬರೆದಿದ್ದಾನೆ. ಹುಟ್ಟು ಕುರುಡನಾದ ಅಂಧಕ ತಪಸ್ಸು ಮಾಡಿ ಕಣ್ಣನ್ನೂ ಅಜೇಯ ಶಕ್ತಿಯನ್ನೂ ಪಡೆದು ಲೋಕಗಳನ್ನೆಲ್ಲ ಹಿಂಸಿಸುತ್ತಿದ್ದಾಗ ಅವನನ್ನು ಶಿವ ಸಂಹರಿಸಿದುದೇ ಇದರ ವಸ್ತು. ಅಲಂಕಾರ ಶಾಸ್ತ್ರ, ರಾಜನೀತಿಶಾಸ್ತ್ರ ಮತ್ತು ಚಿತ್ರಕಲೆಯಲ್ಲಿ ಈತನ ಪಾಂಡಿತ್ಯ ಅದ್ಭುತವಾದುದು. ವರ್ಣನೆಗಳಲ್ಲಿ ಬಾಣ ಮಾಘರಿಗಿಂತಲೂ ಈತ ಒಂದು ಹೆಜ್ಜೆ ಮುಂದಿರುವ. ಕೈಲಾಸ, ತಾಂಡವನೃತ್ಯ , ಮೇರು, ಮಂದರ- ಇವೇ ಮೊದಲಾದುವುಗಳ ವರ್ಣನೆಗಳಿವೆ. ರಾಜನೀತಿಗೆ ಸಂಬಂಧಿಸಿದ ವಿಚಾರಗಳನ್ನು ವಿಸ್ತಾರವಾಗಿ ಕಾವ್ಯದಲ್ಲಿ ಹೆಣೆದಿದ್ದಾನೆ. ಈತನಿಗೆ ವಾಗೀಶ್ವರ ಮತ್ತು ವಿದ್ಯಾಪತಿ ಎಂಬ ಬಿರುದುಗಳಿದ್ದುವು. ಈತ ಕಾಶ್ಮೀರದ ಅವಂತಿವರ್ಮನ (ಕ್ರಿ.ಶ.850) ಆಸ್ಥಾನದಲ್ಲಿದ್ದ.

	ಈತನ ಕಿರಿಯ ಸಮಕಾಲೀನನಾದ, ಅದೇ ಆಸ್ಥಾನದಲ್ಲಿದ್ದ ಶಿವಸ್ವಾಮಿ ಕಪ್ಫಿನಾಭ್ಯುದಯ ಎಂಬ ಕಾವ್ಯ ಬರೆದ. ಇದು 20 ಸರ್ಗಗಳಲ್ಲಿರುವ ಒಂದು ಬೌದ್ಧ ಕಥೆ. ದಕ್ಷಿಣಾಪಥದ ದೊರೆ ಕಪ್ಬಿಣ ಶ್ರವಸ್ತಿಯ ಪ್ರಸೇನಜಿತ್ತನ ಮೇಲೆ ದಂಡೆತ್ತಿ ಹೋದ. ಅವನನ್ನು ಗೆದ್ದನಾದರೂ ಸಂಸಾರದಲ್ಲಿ ಬೇಸರಪಟ್ಟು ಬೌದ್ಧನಾಗುತ್ತಾನೆ. ಕಾವ್ಯದ ಶೈಲಿ ಕ್ಲಿಷ್ಟವಾಗಿದೆ. ಮಾಘನ ಅನುಕರಣೆ ಹೆಚ್ಚಾಗಿ ಕಂಡುಬರುತ್ತದೆ. ಭಾಷೆಯ, ಛಂದಸ್ಸುಗಳ ಹಾಗೂ ಅಲಂಕಾರಗಳ ಉಪಯೋಗದಲ್ಲಿ ಹೆಚ್ಚು ಪಾಂಡಿತ್ಯ ತೋರ್ಪಡಿಸಿದ್ದಾನೆ. 19ನೆಯ ಸರ್ಗದಲ್ಲಿ ಪ್ರಾಕೃತ ಭಾಷೆಯಲ್ಲಿ ಬುದ್ಧನನ್ನು ಸ್ತುತಿಸಿದ್ದಾನೆ. 20ನೆಯ ಸರ್ಗದಲ್ಲಿ ಅದಕ್ಕೆ ಬುದ್ಧನ ಅನುಗ್ರಹ ರೂಪವಾದ ಉತ್ತರವನ್ನು ಸಂಸ್ಕøತದಲ್ಲಿ ಬರೆದಿದ್ದಾನೆ.

	 ಕವಿರಾಜನ ರಾಘವಪಾಂಡವೀಯ ಎಂಬ ಕಾವ್ಯ ಭಾಷೆಯನ್ನು ಬಳಸುವ ಚಾತುರ್ಯವನ್ನು ಬೆಳಗುತ್ತದೆ. ಇಲ್ಲಿ ರಾಮಾಯಣ ಮತ್ತು ಮಹಾಭಾರತಗಳಿಂದ ಪ್ರತಿಯೊಂದು ಶ್ಲೋಕ ಒಮ್ಮೆಲೆ ಎರಡು ಕಥೆಗಳನ್ನು ಹೇಳುತ್ತದೆ. ಆದರೂ ಕಾವ್ಯಮಧುರವಾಗಿದೆ. ಈತ ಪಾರಿಜಾತಹರಣ ಎಂಬ ಮತ್ತೊಂದು ಕಾವ್ಯವನ್ನು 10ಸರ್ಗಗಳಲ್ಲಿ ಬರೆದಿದ್ದಾನೆ. ಭಾಗವತದಲ್ಲಿರುವಂತೆ ಇಂದ್ರನ ತೋಟದಿಂದ ಪಾರಿಜಾತ ವೃಕ್ಷವನ್ನು ಕೃಷ್ಣ ಬಲಾತ್ಕಾರವಾಗಿ ತೆಗೆದುಹಾಕಿದ ಕಥೆಯಿದೆ. ಶ್ಲೇಷಾದಿಗಳಿಂದ ದೂರವಾದ ಶೈಲಿಯಲ್ಲಿರುವ ಈ ಕಾವ್ಯ ಕವಿರಾಜನ ಕವಿತೆಯ ಉಕ್ಕøಷ್ಟತೆಯನ್ನು ತೋರಿಸುತ್ತದೆ. ದಾಕ್ಷಿಣಾತ್ಯನಾದ ಈತನ ಕಾಲ ಕ್ರಿ.ಶ. 9ನೆಯ ಶತಮಾನ ಅಥವಾ 12ನೆಯ ಶತಮಾನದ ಉತ್ತರಾರ್ಧ.

	ಪದ್ಮಗುಪ್ತ ತನ್ನ ಪೋಷಕನಾದ ದೊರೆ ಸಿಂಧುರಾಜನ (995-1010) ವಿಷಯದಲ್ಲಿ ನವಸಾಹಸಾರಕ ಚರಿತ ಎಂಬ ಕಾವ್ಯವನ್ನು 18 ಸರ್ಗಗಳಲ್ಲಿ ಬರೆದ. ಸಿಂಧುರಾಜ ನಾಗಕನ್ಯೆಯಾದ ಶಶಿಪ್ರಭೆಯನ್ನು ವಿವಾಹವಾದುದೇ ಇದರ ವಸ್ತು. ಬಹಳ ಉದ್ದವಾದ ಸಂಭಾಷಣೆಗಳು ಮತ್ತು ವರ್ಣನೆಗಳಿಂದ ಕಥಾಸರಣಿ ಅಲ್ಲಲ್ಲಿ ಕುಂಟುತ್ತದೆ. ಸಂಸ್ಕøತದ ಇತಿಹಾಸ ಕಾವ್ಯಗಳಲ್ಲಿ ಇದು ಒಂದೆಂದು ಪರಿಗಣಿಸಲ್ಪಟ್ಟಿದೆ. ಬಿಲ್ಹಣ ಕಲ್ಯಾಣದ ಚಾಲುಕ್ಯ ದೊರೆ 6ನೆಯ ವಿಕ್ರಮಾದಿತ್ಯನ (1076-1126) ಆಸ್ತಾನದಲ್ಲಿದ್ದ. ಆ ದೊರೆಯ ಚರಿತ್ರೆಯನ್ನು ವಿಕ್ರಮಾಂಕದೇವ ಚರಿತದಲ್ಲಿ 17 ಸರ್ಗಗಳಲ್ಲಿ ವರ್ಣಿಸಿದ್ದಾನೆ. ಹಿಂದಿನ ಕಾವ್ಯಗಳಲ್ಲಿದ್ದಂತೆ ವರ್ಣನೆಗಳಿಂದ ತುಂಬಿದ್ದರೂ ಬಿಲ್ಹಣನ ಕವಿತಾ ಸಾಮಥ್ರ್ಯ ಶ್ರೇಷ್ಠವಾದುದು. ಸರಸವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಅಪೂರ್ವ ಶಕ್ತಿ ಈತನದು. ಶೈಲಿ ಸರಳ, ಸ್ಪಷ್ಟ, ಶ್ಲೇಷ, ಯಮಕ ದೀರ್ಘ ಸಮಾಸಗಳನ್ನು ಹೆಚ್ಚಾಗಿ ಉಪಯೋಗಿಸಿಲ್ಲ. ಕಡೆಯ ಸರ್ಗದಲ್ಲಿ ಆತ್ಮಕಥೆ ಹೇಳಿಕೊಂಡಿದ್ದಾನೆ. ಇದು ಒಂದು ಇತಿಹಾಸ ಕಾವ್ಯ.

	ಶೈವದರ್ಶನದಲ್ಲೂ ಅಲಂಕಾರಶಾಸ್ತ್ರದಲ್ಲೂ ಅನೇಕ ಗ್ರಂಥಗಳನ್ನು ಬರೆದ ಕ್ಷೇಮೇಂದ್ರನ ಕಾವ್ಯಗಳಲ್ಲಿ ದಶಾವತಾರ ಚರಿತ್ರೆಯನ್ನು ಇಲ್ಲಿ ಉದಾಹರಿಸಬಹುದು. ವಿಷ್ಣುವಿನ ಹತ್ತು ಅವತಾರಗಳನ್ನು ಕಾವ್ಯಶೈಲಿಯಲ್ಲಿ ಈತ ವಿವರಿಸುತ್ತಾನೆ. ಈತ ಕಾಶ್ಮೀರದಲ್ಲಿ 11ನೆಯ ಶತಮಾನದ ಉತ್ತರಾರ್ಧದಲ್ಲಿದ್ದ.

	ಶ್ರೀಕಂಠ ಚರಿತ ಎಂಬ 25 ಸರ್ಗಗಳ ಕಾವ್ಯ ಬರೆದ ಮಂಖ ಅಥವಾ ಮಂಖಿಕ ಕಾಶ್ಮೀರದವ. ಶಿವನಿಂದ ಆದ ತ್ರಿಪುರದಹಸೆದ ಪುರಾಣಕಥೆಯನ್ನು ಕವಿ ವಿಸ್ತಾರವಾಗಿ ವರ್ಣಿಸಿದ್ದಾನೆ. ಭಾಷೆಯ ಮೇಲೆ ಅಪೂರ್ವ ಹಿಡಿತವಿದ್ದರೂ ಈತನ ಶೈಲಿ ಸರಳವಾಗಿಲ್ಲ. ಮೂರನೆಯ ಸರ್ಗದಲ್ಲಿ ತನ್ನ ವಂಶ ಹಾಗೂ ತನ್ನ ದೇಶದ ವಿವರಗಳನ್ನೆತ್ತಿದ್ದಾನೆ. ನಾಲ್ಕನೆಯ ಸರ್ಗದಲ್ಲಿ ಕೈಲಾಸದ ವರ್ಣನೆಯಿಂದ ಕಥೆ ಆರಂಭಿಸುತ್ತಾನೆ. ಕಡೆಯ ಸರ್ಗದಲ್ಲಿ ಜಯಸಿಂಹನ ಆಸ್ಥಾನದಲ್ಲಿ ನಡೆದ ಪಂಡಿತರ ಸಭೆಯೊಂದರ ವರ್ಣನೆಯಿದೆ. ಅನೇಕ ವ್ಯಕ್ತಿಗಳ ಹೆಸರುಗಳನ್ನು ಮತ್ತು ಅವರ ಹುದ್ದೆಗಳನ್ನು ತಿಳಿಸಿದ್ದಾನೆ. ಇದರ ಹೊರತು, ನಿರ್ದಿಷ್ಟ ಮಾರ್ಗದಿಂದ ಅತ್ತಿತ್ತ ಹೋಗದ ಈ ಕಾವ್ಯ ಸಾಮಾನ್ಯವಾಗಿ ಕ್ಲಿಷ್ಟವೇ. ಇದು ಕೊಂಚಮಟ್ಟಿಗೆ ಇತಿಹಾಸಕ್ಕೂ ಸಹಾಯ ಮಾಡುತ್ತದೆ. ಈತ ಕಾಶ್ಮೀರದ ಅರಸು ಜಯಸಿಂಹನ (1137-59) ಆಸ್ಥಾನದಲ್ಲಿದ್ದವ.

	ಕಲ್ಹಣನ ರಾಜತರಂಗಿಣಿ ಸಂಸ್ಕøತಸಾಹಿತ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಕಾಶ್ಮೀರದ ಅರಸರ ಇತಿಹಾಸವನ್ನು ಕಾವ್ಯದ ವಸ್ತುವಾಗಿ ಆರಿಸಿದರೂ ವಿವರಗಳನ್ನು ಇಂದಿನ ಇತಿಹಾಸಕಾರರಂತೆಯೇ ಸಂಗ್ರಹಿಸಿದ್ದಾನೆಂದು ಹೇಳಬಹುದು. 8ನೆಯ ಶತಮಾನದಿಂದೀಚೆಗೆ ಈತನ ಹೇಳಿಕೆಗಳು ಸಾಕಷ್ಟು ಸಮರ್ಥಿತವಾಗಿವೆ. ಇದನ್ನು 1148ರಲ್ಲಿ ಬರೆದ.

	ನೈಷಧೀಯ ಚರಿತವನ್ನು ಬರೆದ ಶ್ರೀಹರ್ಷ ದಾರ್ಶನಿಕನಾಗಿಯೂ ಪ್ರಸಿದ್ಧನಾಗಿದ್ದಾನೆ. 22 ಸರ್ಗಗಳಲ್ಲಿರುವ ಈ ಕಾವ್ಯ ಐದು ಪ್ರಮುಖ ಮಹಾಕಾವ್ಯಗಳಲ್ಲೊಂದು. ಶ್ರೀಹರ್ಷ ಮಹಾಭಾರತದಲ್ಲಿಯ ನಲೋಪಾಖ್ಯಾನವನ್ನು	ನಳನ ರಾಜಧಾನಿಗೆ ಕಲಿಯ ಪ್ರವೇಶದವರಿಗೆ ಮಾತ್ರ ವಿಸ್ತರಿಸಿದ್ದಾನೆ. ಭಾರವಿಯಿಂದ ಆರಂಭವಾಗಿ ಮಾಘನಲ್ಲಿ ಬೆಳೆದು ಬಂದ ಕ್ಲಿಷ್ಟ ಶೈಲಿ ಶ್ರೀಹರ್ಷನಲ್ಲಿ ಪೂರ್ಣ ರೂಪ ತಾಳಿದೆ. ಅನೇಕ ಶಾಸ್ತ್ರ ವಿಚಾರಗಳನ್ನು ಕಾವ್ಯದ ನೆಪದಲ್ಲಿ ವಿಸ್ತಾರವಾಗಿ ಹೇಳಿದ್ದಾನೆ. ಆದುದರಿಂದಲೇ ಇದನ್ನು ವಿದ್ವದೌಷಧ-ವಿದ್ವಾಂಸರಿಗೂ ಇದು ಔಷಧಿ-ಎಂದು ಕರೆಯುತ್ತಾರೆ. ಇವನ ಕಾಲ 12ನೆಯ ಶತಮಾನದ ಉತ್ತರಾರ್ಧ. 

	ಅಲಂಕಾರ ಹಾಗೂ ವ್ಯಾಕರಣ ಶಾಸ್ತ್ರ ಗ್ರಂಥಕರ್ತನೆಂದು ಪ್ರಸಿದ್ಧನಾದ ಜೈನಕವಿ ಹೇಮಚಂದ್ರ ಕುಮಾರಪಾಲಚರಿತ ಎಂಬ ಕಾವ್ಯ ಬರೆದಿದ್ದಾನೆ. ಇದು ದ್ವ್ಯಾಶ್ರಯ ಕಾವ್ಯ. ಮೊದಲ 20ಸರ್ಗಗಳು ಸಂಸ್ಕøತದಲ್ಲಿಯೂ ಉಳಿದ ಎರಡು ಸರ್ಗಗಳು ಪ್ರಾಕೃತದಲ್ಲಿಯೂ ಇವೆ. ಭಟ್ಟಿಯಂತೆ ಈತನ ಕಾವ್ಯ ವ್ಯಾಕರಣದ ಪ್ರಕ್ರಿಯೆಗಳಿಗೆ ಉದಾಹರಣೆಯಾಗಿ ರಚಿಸಲ್ಪಟ್ಟಿದೆ. ಈತನ ಕಾಲ 1088-1172. 

	ನೀತಿವರ್ಮನ ಕೀಚಕವಧ ಯಮಕ ಕಾವ್ಯವಾಗಿದೆ. ಇದರ ಐದು ಸರ್ಗಗಳಲ್ಲಿ 4ರಲ್ಲಿ ಯಮಕವನ್ನೂ 1ರಲ್ಲಿ (2ನೆಯದು) ಶ್ಲೇಷವನ್ನೂ ಬಳಸಿದ್ದಾನೆ. ವಿರಾಟನಗರದಲ್ಲಿ ಭೀಮನಿಂದ ಆದ ಕೀಚನಕ ವಧೆ ಇದರ ವಸ್ತು. ಕೇವಲ ಯಮಕಾದಿಗಳಿಗಾಗಿಯೇ ಬರೆದ ಈ ಕಾವ್ಯ ಕವಿಗಿರುವ ಭಾಷಜ್ಞಾನ ಪ್ರೌಢಿಮೆಗೆ ಕನ್ನಡಿಯಾಗಿದೆಯೇ ಹೊರತು ಮಾಧುರ್ಯವೇನೂ ಇಲ್ಲ. ಈತ 11ನೆಯ ಶತಮಾನದ ಆದಿ ಭಾಗದಲ್ಲಿದ್ದವ. 

	ಕಾಶ್ಮೀರದವನಾದ ಜಯದ್ರಥ ಚಿಂತಾಮಣಿ ಎಂಬ 32ಸರ್ಗಗಳ ಕಾವ್ಯ ಬರೆದ. ಶಿವನಿಗೆ ಮತ್ತು ಅವನ ಅವತಾರಗಳಿಗೆ ಸಂಬಂಧಪಟ್ಟ ಅನೇಕ ಕಥೆಗಳು ಇದರ ವಸ್ತುವಾಗಿವೆ. ಮಾಹಾತ್ಮ್ಯಗ್ರಂಥದಂತಿರುವ ಈ ಕಾವ್ಯದಲ್ಲಿ ಕಥಾ ಸಂದರ್ಭದಲ್ಲಿ ಬರುವ ಕಾಶ್ಮೀರದ ಅನೇಕ ತೀರ್ಥಗಳ ವರ್ಣನೆಯಿದೆ. ಇದರಿಂದ ಕಾಶ್ಮೀರದ ಪ್ರಕೃತಿ ದೃಶ್ಯಗಳನ್ನು ಚಿತ್ರಿಸುವ ಪ್ರಸಂಗ ಕವಿಗೆ ಒದಗಿದೆ. ಹಾಗೂ ಐತಿಹಾಸಿಕವಾಗಿಯೂ ಈ ಕಾವ್ಯದ ಪ್ರಯೋಜನವಿದೆ. ಈತ 13ನೆಯ ಶತಮಾನದ ಆದಿಯಲ್ಲಿದ್ದವ. 
	
ವಸ್ತುಪಾಲ 1220ರಲ್ಲಿ ಧೋಲ್ಕದ ದೊರೆ ವೀರಧವಲನ (1210-39) ಪ್ರಧಾನ ಮಂತ್ರಿ. ಈತ ಕವಿಕುಂಜರ ಎನಿಸಿಕೊಂಡಿದ್ದುದರ ಜತೆಗೆ ಶ್ರೇಷ್ಠ ಸಹೃದಯನಾ ಲಘುಭೋಜರಾಜ, ಎಂದೂ ಎನಿಸಿಕೊಂಡಿದ್ದ. ಅನೇಕ ಕವಿಗಳಿಗೆ ಆಶ್ರಯ ಕೊಟ್ಟಿದ್ದ. ಅವರಲ್ಲಿ ಸೋಮೇಶ್ವರ, ಅರಿಸಿಂಹ, ಹರಿಹರ ಮತ್ತು ನಾನಕ ಇವರ ಹೆಸರುಗಳನ್ನು ಉಲ್ಲೀಖಿಸಬಹುದು. ಈತನ ಜೀವನ ಚರಿತ್ರೆ ಅನೇಕ ಕವಿಗಳ ಕಾವ್ಯ ವಸ್ತುವಾಗಿದೆ. ವಸ್ತುಪಾಲ ನರನಾರಾತಣನಂದ ಎಂಬ 16 ಸರ್ಗಗಳ ಕಾವ್ಯ, ಬರೆದ. ನರ (ಅರ್ಜುನ) ಮತ್ತು ನಾರಾಯಣ (ಕೃಷ್ಣ) ಇವರ ಸ್ನೇಹ, ಗಿರಿನಾರ್ ಪರ್ವತದ ತಪ್ಪಲಲ್ಲಿ ಅವರ ಚರ್ಯೆಗಳು, ಅರ್ಜುನನಿಂದಾದ ಸುಭದ್ರಾಪಹರಣ-ಇವುಗಳನ್ನು ಸುಂದರವಾಗಿ ವಿವರಿಸಿದ್ದಾನೆ. ಪ್ರತಿಭಾ ಪೂರಿತ ವರ್ಣನೆಗಳಿಂದ ಕಾವ್ಯ ತುಂಬಿದೆ. ಮಾಘನ ಶಿಶುಪಾಲವಧವನ್ನು ಅನುಸರಿಸಿ ಬರೆದಿದ್ದರೂ ಭಾಷೆ ಅದಕ್ಕಿಂತ ಸರಳ ಹಾಗೂ ಮಧುರವಾಗಿದೆ. 

	ಅರಿಸಿಂಹ 11 ಸರ್ಗಗಳ ಸುಕೃತಸಂಕೀರ್ತನ ಎಂಬ ಕಾವ್ಯದಲ್ಲಿ ವಸ್ತುಪಾಲನ ಚರಿತ್ರೆ ವಿವರಿಸಿದ್ದಾನೆ. ಮೊದಲನೆಯ ಸರ್ಗದಲ್ಲಿ ಚಾಪೊತ್ಕಟ ದೊರೆಗಳ ವಂಶವನ್ನು ಎರಡನೆಯದರಲ್ಲಿ ಮೂಲ ರಾಜನಿಂದ ಇಮ್ಮಡಿ ಭೀಮತನಕದ ಚಾಲುಕ್ಯ ದೊರೆಗಳ ರಾಜ್ಯಭಾರವನ್ನು ವಸ್ತುಪಾಲ-ತೇಜಪಾಲರ ಉದಯವನ್ನು ವರ್ಣಿಸಲಾಗಿದೆ. ಮಿಕ್ಕ 9 ಸರ್ಗಗಳಲ್ಲಿ ವಸ್ತುಪಾಲ ಎಸಗಿದ ತೀರ್ಥಯಾತ್ರೆ ಹಾಗೂ ಅವನ ಪುಣ್ಯಕಾರ್ಯಗಳ ಪ್ರಶಂಸೆ ಇದೆ. 

	ಹಮ್ಮೀರ ಮಹಾಕಾವ್ಯ ರಚಿಸಿದ ನಯಚಂದ್ರ ವಸ್ತುಪಾಲನ ಸಮಕಾಲೀನ, ಈತನಿಗೆ ಆರು ಭಾಷೆಗಳಲ್ಲಿ ಪಾಂಡಿತ್ಯವಿತ್ತು. ಈ ಕಾವ್ಯದಲ್ಲಿ 14 ಸರ್ಗಗಳಿವೆ. ಚೌಹಾನ ಕುಲದ ಕಡೆಯ ದೊರೆಯಾದ ಹಮ್ಮೀರ ಕುಲದ ಘನತೆ ಕಾಪಾಡಿಕೊಂಡು ಬರಲು ಬಹಳ ಪ್ರಯತ್ನಿಸಿದ. ಒಮ್ಮೆ ತನ್ನಲ್ಲಿ ಶರಣು ಹೊಕ್ಕ ಒಬ್ಬ ಮೊಗಲ್ ಸಭ್ಯನನ್ನು ಬಿಟ್ಟು ಕೊಡಬೇಕೆಂದು ಅಲಾವುದ್ದೀನ್ ಕೇಳಿದಾಗ ಈತ ಅದಕ್ಕೆ ಒಪ್ಪಲಿಲ್ಲ. ಅಲಾವುದ್ದೀನ್ ಮುತ್ತಿಗೆ ಹಾಕಿದ. ಹಮ್ಮೀರ ಕಾದಾಡುತ್ತ ಮಡಿದ-ಇದು ಈ ಕಾವ್ಯವಸ್ತು. ಹಮ್ಮೀರನಿಗೆ ಅವನ ತಂದೆ ಜೈತ್ರಸಿಂಹ ರಾಜ್ಯಭಾರ ವಿಷಯದಲ್ಲಿ ಮಾಡಿದ ಉಪದೇಶದ ವಿವರಣೆ ಮನನೀಯವಾಗಿದೆ. 

	ವಿಶಿಷ್ಟಾದ್ವೈತ ಮತದಲ್ಲಿ ಸುಪ್ರಸಿದ್ಧ ಎನಿಸಿದ ವೆಂಕಟನಾಥ (ವೇದಾಂತ ದೇಶಿಕ) ಯಾದವಾಭ್ಯುದಯೆಂಬ ಕಾವ್ಯ ಬರೆದಿದ್ಧಾನೆ. 21 ಸರ್ಗಗಳಲ್ಲಿ ಕೃಷ್ಣನ ಹಾಗೂ ಯದುವಂಶದ ಚರಿತೆ ವರ್ಣಿಸಲ್ಪಟ್ಟಿದೆ. ದರ್ಶನ ವಿಚಾರಗಳಷ್ಟೇ ಕಾವ್ಯ ರಚನೆಯಲ್ಲೂ ವೇದಾಂತ ದೇಶಿಕ ಸಿದ್ಧಹಸ್ತ. ಈ ಕವಿ ತಾರ್ಕಿಕಸಿಂಹ ಎನಿಸಿದರೂ ಈತನ ಕಾವ್ಯಗಳು ಲಲಿತ ಎನಿಸಿಕೊಂಡಿವೆ. ಈತನ ಕಾಲ 1268-1369. 

	ರುಕ್ಮಿಣೀ ಕಲ್ಯಾಣವನ್ನು ವಿದ್ಯಾಚಕ್ರವರ್ತಿ ರಚಿಸಿದ. ರಮ್ಯವಾದ 16 ಸರ್ಗಗಳ ಈ ಕಾವ್ಯದಲ್ಲಿ ಕೃಷ್ಣ ಮತ್ತು ರುಕ್ಮಿಣಿ ಇವರ ವಿವಾಹ ವರ್ಣಿಸಿದೆ. ಈತನನ್ನು ಕವಿ ಶ್ರೇಷ್ಠರಲೊಬ್ಬ ಎಂದು ಪರಿಗಣಿಸಬಹುದು. ಮೊದಲನೆಯ ಸರ್ಗದಲ್ಲಿ ಹೊಯ್ಸಳರ ವಂಶಾವಳಿಯನ್ನೂ ತನ್ನ ವಂಶದ ವಿವರಗಳನ್ನೂ ಕೊಟ್ಟಿದ್ದಾನೆ. ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳನ (1921-1342) ಆಸ್ಥಾನದಲ್ಲಿ ಈತ ಇದ್ದ. 

	ಮಹಾಭಾರತದ ಕಥೆಯನ್ನು ಪೂರ್ಣವಾಗಿ 20 ಸರ್ಗಗಳಲ್ಲಿ ಬಾಲ ಭಾರತ ಎಂಬ ಹೆಸರಿನಲ್ಲಿ ಅಗಸ್ತ್ಯ ಬರೆದ. ಈತನ ಕಾವ್ಯ ಮಧುರವಾಗಿದೆ ಮತ್ತು ಪದಗಳ ಜೋಡಣೆ ಶ್ಲಾಘನೀಯ. ವಾರಂಗಲ್ಲಿನ ದೊರೆ ಪ್ರತಾಪ ರುದ್ರದೇವನ (ಕ್ರಿ.ಶ.1294-1325) ಆಸ್ಥಾನ ಕವಿಯಾಗಿದ್ದ. 

	ಗಂಗಾದೇವಿ ಮೊದಲನೆಯ ಬುಕ್ಕನ (ಕ್ರಿ.ಶ. 1343-79)ಎರಡನೆಯ ಮಗ ಕಂಪಣನ (ಅಥವಾ ಕಂಪರಾಯ) ಮಡದಿ. ಈಕೆ ಮಧುರಾವಿಜಯ ಅಥವಾ ವೀರಕಂಪರಾಯ ಚರಿತೆ ಎಂಬ ಕಾವ್ಯ ರಚಿಸಿದ್ದಾಳೆ. ಇದರಲ್ಲಿ ಕಂಪಣ ಮಧುರೆಯ ಸುಲ್ತಾನನ್ನು ಗೆದ್ದುದನ್ನು ವರ್ಣಿಸಿದ್ದಾಳೆ. ವಿಜಯನಗರ ಪಟ್ಟಣದ ವರ್ಣನೆ ಅದ್ಭುತವಾಗಿದೆ. ಕಾವ್ಯದ ಭಾಷೆ ಮಧುರವಾಗಿದೆ. ಈ ಗ್ರಂಥ ಪೂರ್ಣವಾಗಿ ದೊರೆತಿಲ್ಲ. 

	ಕವಿರಾಜನಂತೆಯೇ ಎರಡು ಅಥವಾ ಮೂರು ಕಥೆಗಳನ್ನು ಹೆಣೆಯುವ ಕವಿಗಳಲ್ಲಿ ವೆಂಕಟಾಧ್ವರಿಯನ್ನು ಇಲ್ಲಿ ಹೆಸರಿಸಬಹುದು. ಭಾಗವತ ಮತ್ತು ರಾಮಾಯಣ ಕಥೆಗಳನ್ನು ಯಾದವರಾಘವೀಯ ಕಾವ್ಯದಲ್ಲಿ ಒಟ್ಟಿಗೆ ಹೆಣೆದಿದ್ದಾನೆ. ಅತಿಯಾದ ಶಬ್ದಾಲಂಕಾರಗಳಿಂದ ಕಾವ್ಯ ಕ್ಲಿಷ್ಟವಾಗಿದೆ. ಈ ಕಾವ್ಯಕ್ಕಿಂತ ಕವಿಯ ಹೆಸರನ್ನು ಪ್ರಸಿದ್ಧಿಗೆ ತಂದುದು ಈತನ ವಿಶ್ವಗುಣಾದರ್ಶನ ಕಾವ್ಯ. ಈತ 17ನೆಯ ಶತಮಾನದ ಪ್ರಥಮಾರ್ಧದಲ್ಲಿದ್ದ. 

	ಮಧುರೆಯ ಸುಂದರನಾಥ ಶಿವನ 64 ಲೀಲೆಗಳ ಪ್ರಚಲಿತಕಥೆಯ ಆಧಾರದ ಮೇಲೆ ನೀಲಕಂಠದೀಕ್ಷಿತ ಶಿವಲೀಲಾರ್ಣವ ಎಂಬ ಕಾವ್ಯವನ್ನು 22 ಸರ್ಗಗಳಲ್ಲಿ ಬರೆದಿದ್ದಾನೆ. ಗಂಗಾವತರಣವೆಂಬ 9 ಸರ್ಗಗಳ ಮತ್ತೊಂದು ಕಾವ್ಯವನ್ನು ಈತ ರಚಿಸಿದ. ಭಗೀರಥ ಗಂಗೆಯನ್ನು ಭೂಮಿಯ ಮೇಲೆ ಹರಿಸಿದುದೇ ಕಾವ್ಯದ ವಸ್ತು. ಕನ್ನಡದಲ್ಲಿ ಕುವೆಂಪುರವರ ರಾಮಾಯಣ ದರ್ಶನಂ. ವಿ.ಕೃ. ಗೋಕಾಕ್ ಅವರ ಭಾರತ ಸಿಂಧುರಶ್ಮಿ, ಭೂಸನೂರ ಮಠ ಅವರ ಭವ್ಯಮಾನವ ಅಧುನಿಕ ಕನ್ನಡ ಮಹಾಕಾವ್ಯಗಳೆಂದು ಪರಿಗಣಿಸಲಾಗಿದೆ. 
(ಎಸ್. ಆರ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ